ಮೈಸೂರು ಭಾರತದ ಕರ್ನಾಟಕ ರಾಜ್ಯದ ಒಂದು ವಿಭಾಗ, ಜಿಲ್ಲೆ, ತಾಲ್ಲೂಕು ಮತ್ತು ಅವುಗಳ ಆಡಳಿತ ಕೇಂದ್ರ ನಗರ. ಮೈಸೂರು ವಿಭಾಗಕ್ಕೆ ಮಂಡ್ಯ, ಕೊಡಗು, ಹಾಸನ, ಮೈಸೂರು, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ಸೇರಿವೆ. 

ಜಿಲ್ಲೆ : ಕರ್ನಾಟಕ ರಾಜ್ಯದ ದಕ್ಷಿಣಾಂತ್ಯದಲ್ಲಿರುವ ಈ ಜಿಲ್ಲೆಯನ್ನು ಪೂರ್ವ ಮತ್ತು ಈಶಾನ್ಯದಲ್ಲಿ ಮಂಡ್ಯ ಜಿಲ್ಲೆಯೂ, ಆಗ್ನೇಯ ಮತ್ತು ದಕ್ಷಿಣದಲ್ಲಿ ಚಾಮರಾಜನಗರ ಜಿಲ್ಲೆಯೂ ನೈಋತ್ಯದಲ್ಲಿ ಕೇರಳ ರಾಜ್ಯವೂ ಪಶ್ಚಿಮದಲ್ಲಿ ಕೊಡಗು ಜಿಲ್ಲೆ ಮತ್ತು ವಾಯವ್ಯದಲ್ಲಿ ಹಾಸನ ಜಿಲ್ಲೆ ಸುತ್ತುವರಿದಿವೆ. ದಕ್ಷಿಣ ಪ್ರಸ್ಥಭೂಮಿಯ ಒಂದು ಭಾಗವಾಗಿರುವ ಈ ಜಿಲ್ಲೆ ಉತ್ತರ ಅಕ್ಷಾಂಶ 110 30' ನಿಂದ 120 45' ಪೂರ್ವರೇಖಾಂಶ 750 45' ನಿಂದ 770 45' ವರೆಗೆ ಹಬ್ಬಿದೆ. ಜಿಲ್ಲಾ ವಿಸ್ತೀರ್ಣ 6269 ಚ. ಕಿ. ಮೀ. ಜನಸಂಖ್ಯೆ 26,24,911 (2001).

ಮೇಲ್ಮೈ ಲಕ್ಷಣ : ಮೈಸೂರು ಜಿಲ್ಲೆ ಸಮುದ್ರ ಮಟ್ಟದಿಂದ ಸುಮಾರು 610 ಮೀ. ಎತ್ತರದಲ್ಲಿದೆ. ಜಿಲ್ಲೆ ಪಿರಿಯಾಪಟ್ಟಣ ಮತ್ತು ಹೆಗ್ಗಡದೇವನ ಕೋಟೆ ತಾಲ್ಲೂಕುಗಳ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ನಡುವೆ ಹಬ್ಬಿದೆ. ಈ ಜಿಲ್ಲೆಯ ಮುಖ್ಯ ಬೆಟ್ಟಗಳಲ್ಲಿ, ಮೈಸೂರಿನ ಚಾಮುಂಡಿಬೆಟ್ಟ (1,063 ಮೀ), ಟಿ. ನರಸೀಪುರದ ಶಂಭುಲಿಂಗೇಶ್ವರ ಬೆಟ್ಟ ಮತ್ತು ವಾಯವ್ಯದ ಕಡೆ ಇರುವ ಬೆಟ್ಟದ ಪುರದ ಬೆಟ್ಟ (ಸು. 1337.76 ಮೀ) ಅಲ್ಲದೇ ಅನೇಕ ಸಣ್ಣಪುಟ್ಟ ಬೆಟ್ಟಗಳೂ ಇವೆ.

ಈ ಜಿಲ್ಲೆಯನ್ನು ಪಶ್ಚಿಮದ ಉಪಮಲೆನಾಡು ಪ್ರದೇಶ, ಮಧ್ಯದ ಕಾಲುವೆ ನೀರಾವರಿ ಪ್ರದೇಶ, ಪೂರ್ವದ ಕೆರೆ ನೀರಾವರಿಯ ಶುಷ್ಕಪ್ರದೇಶವೆಂದು ವಿಂಗಡಿಸಬಹುದು. ಪಶ್ಚಿಮದ ಉಪಮಲೆನಾಡನ್ನು ಬಿಟ್ಟು ಜಿಲ್ಲೆಯ ಉಳಿದ ಭಾಗ ಅಸಮ ಇಳಿಜಾರಿನ ಏರಿಳಿತಗಳಿಂದ ಕೂಡಿದ ಮೈದಾನ ಪ್ರದೇಶ. ಮಧ್ಯಭಾಗ ಕಾಲುವೆ ಮತ್ತು ನದಿಗಳ ನೀರಾವರಿಯಿಂದ ಕೂಡಿದ ತರಿಬೆಳೆಗಳ ಸಮೃದ್ಧ ವ್ಯವಸಾಯ ಪ್ರದೇಶವೆಂದರೆ ಪೂರ್ವದ ಮೈದಾನ, ಕೆರೆ ನೀರಾವರಿಯ ಶುಷ್ಕ ಆಹಾರಬೆಳೆ ಮತ್ತು ವಾಣಿಜ್ಯ ಬೆಳೆಗಳ ನಾಡು. ಒಟ್ಟಿನಲ್ಲಿ ಈ ಜಿಲ್ಲಾ ಭೂಮಟ್ಟ ಪಶ್ಚಿಮದಿಂದ ಪೂರ್ವದ ಕಡೆಗೆ ಕ್ರಮೇಣ ಇಳಿಜಾರಾಗಿದೆ. 

ಮೈಸೂರು ಜಿಲ್ಲೆಯನ್ನು ಪಿರಿಯಾಪಟ್ಟಣ, ಕೆ.ಆರ್.ನಗರ, ಮೈಸೂರು, ಹೆಗ್ಗಡದೇವನಕೋಟೆ, ನಂಜನಗೂಡು, ತಿರುಮಕೂಡಲು ನರಸೀಪುರ, ಹುಣಸೂರು ತಾಲ್ಲೂಕುಗಳಾಗಿ ವಿಂಗಡಿಸಿದೆ. ಒಟ್ಟು 33 ಹೋಬಳಿಗಳಿವೆ.

ವಾಯುಗುಣ : ಇಲ್ಲಿ ಉಷ್ಣವಲಯದ ಮಾನ್‍ಸೂನ್ ಮಾರುತಗಳ ವಾಯುಗುಣವಿದೆ. ಸರಾಸರಿ ಉಷ್ಣತೆ 12.90 ಸೆ. ನಿಂದ 36.50 ಸೆ. ಇರುತ್ತದೆ. ಪಶ್ಚಿಮದ ಉಪಮಲೆನಾಡು ಪ್ರದೇಶಕ್ಕೆ ಸೇರಿದ ಹೆಗ್ಗಡದೇವನಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣ ತಾಲ್ಲೂಕುಗಳಲ್ಲಿ ಚಳಿಗಾಲ ಮತ್ತು ಮಳೆಗಾಲದಲ್ಲಿ ತೇವದಿಂದ ಕೂಡಿದ ತಂಪಾದ ಹವೆ ಇರುತ್ತದೆ. ಉಳಿದ ತಾಲ್ಲೂಕುಗಳಲ್ಲಿ ನದಿ ಹರಿಯುವ ಪ್ರದೇಶಗಳನ್ನು ಉಳಿದು ಇತರ ಎಲ್ಲಾ ಭಾಗಗಳಲ್ಲೂ ಶುಷ್ಕ ಹವೆ ಇರುತ್ತದೆ. ಇಲ್ಲಿ ಹಗಲು ಮತ್ತು ರಾತ್ರಿ ಹಾಗೂ ಚಳಿಗಾಲ ಮತ್ತು ಬೇಸಗೆ ಕಾಲದ ಉಷ್ಣತೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತದೆ. ಸಾಮಾನ್ಯವಾಗಿ ಜೂನ್‍ನಿಂದ ಸೆಪ್ಟೆಂಬರ್ ತನಕ ಬೀಸುವ ನೈಋತ್ಯ ಮಾನ್‍ಸೂನ್ ಮಾರುತಗಳಿಂದ ಅಧಿಕ ಮಳೆಯಾಗುತ್ತದೆ. ಜಿಲ್ಲೆಯ ಸರಾಸರಿ ಮಳೆ ಪ್ರಮಾಣ ಸುಮಾರು 761.9 ಮಿ.ಮೀ. ಪಶ್ವಿಮದ ಉಪಮಲೆನಾಡು ಪ್ರದೇಶಗಳಲ್ಲಿ ಜಿಲ್ಲೆಯ ಇತರ ಭಾಗಕ್ಕಿಂತ ಹೆಚ್ಚುಮಳೆ ಬೀಳುತ್ತದೆ. ಪಶ್ಚಿಮದಿಂದ ಪೂರ್ವಕ್ಕೆ ಮಳೆ ಪ್ರಮಾಣ ಕಡಿಮೆಯಾಗುತ್ತ ಹೋಗುತ್ತದೆ. 

ನದಿಗಳು : ಕಾವೇರಿ, ಲಕ್ಷ್ಮಣತೀರ್ಥ ಮತ್ತು ಕಪಿಲಾ ಮುಖ್ಯ ನದಿಗಳು. ಕಾವೇರಿ ನದಿ ನೆರೆಯ ಕೊಡಗು ಜಿಲ್ಲೆಯ ತಲಕಾವೇರಿ ಎಂಬಲ್ಲಿ ಹುಟ್ಟಿ ವಾಯುವ್ಯ ಕಡೆಯಿಂದ ಜಿಲ್ಲೆಯನ್ನು ಪ್ರವೇಶಿಸಿ, ಪೂರ್ವಾಭಿಮುಖವಾಗಿ ಹರಿದು ಮಂಡ್ಯ ಜಿಲ್ಲೆಯ ಮೂಕ ಪುನಃ ಮೈಸೂರು ಜಿಲ್ಲೆಯನ್ನು ಈಶಾನ್ಯದಿಕ್ಕಿನಿಂದ ಸೇರಿ ಪೂರ್ವ ದಿಕ್ಕಿಗೆ ಹರಿಯುತ್ತದೆ. ಜಿಲ್ಲೆಯಲ್ಲಿ ಇದು ಸುಮಾರು 242 ಕಿ.ಮೀ. ದೂರ ಪ್ರವಹಿಸುತ್ತದೆ. ಕಪಿಲಾ (ಸು. 147 ಕಿ.ಮೀ), ಲಕ್ಷ್ಮಣತೀರ್ಥ (65 ಕಿ.ಮೀ.), ಹೊನ್ನುಹೊಳೆ ಮುಂತಾದ ಉಪನದಿಗಳು ಕಾವೇರಿಯನ್ನು ಈ ಜಿಲ್ಲೆಯಲ್ಲಿ ಸೇರುತ್ತವೆ. ಕಪಿಲಾ ಕೇರಳದ ವೈನಾಡಿನಲ್ಲಿ ಹುಟ್ಟಿ ಕೊಡಗಿನ ಮೂಲಕ ಹರಿದು ಮೈಸೂರು ಜಿಲ್ಲೆಯನ್ನು ತಲುಪಿ, ಟಿ. ನರಸೀಪುರದ ಹತ್ತಿರ ಕಾವೇರಿಯನ್ನು ಸೇರುತ್ತದೆ. ಕಪಿಲಾ ನದಿಗೆ ಗುಂಡ್ಲುಹೊಳೆ, ನುಗುಹೊಳೆ ಎಂಬ ಉಪನದಿಗಳಿವೆ. ಉಡುತೊರೆಹಳ್ಳ, ಮಾವಿನಹಳ್ಳ, ಸುವರ್ಣಾವತಿ, ಚಿಕ್ಕಹೊಳೆ ಮುಂತಾದ ನದಿಗಳೂ ಇವೆ.

ಮಣ್ಣು : ಈ ಜಿಲ್ಲೆಯಲ್ಲಿ ಕೆಂಪುಮಣ್ಣು, ಮರಳುಮಣ್ಣು ಲ್ಯಾಟರೈಟ್ ಮಣ್ಣು, ಕೆಂಪು ಜೇಡಿಮಣ್ಣು ಮತ್ತು ಕಪ್ಪುಮಣ್ಣು ಕಂಡುಬರುತ್ತದೆ. ಲ್ಯಾಟರೈಟ್ ಮಣ್ಣು ಜಿಲ್ಲೆಯ ಪಶ್ಚಿಮ ಭಾಗದಲ್ಲೂ ಕೆಂಪುಮಣ್ಣು ವಾಯವ್ಯ ಭಾಗದಲ್ಲೂ ಕಂಡುಬರುತ್ತದೆ. ಈ ಎರಡು ವಿವಿಧ ಮಣ್ಣು ಜಿಲ್ಲೆಯ ಸುಮಾರು ಅರ್ಧ ಭಾಗದಷ್ಟು ಪ್ರದೇಶದಲ್ಲಿ ಹರಡಿದೆ. ಕಪ್ಪುಮಣ್ಣು ಜಿಲ್ಲೆಯ ಈಶಾನ್ಯ ಭಾಗದಲ್ಲಿ, ಕೆಂಪುಮಿಶ್ರಿತ ಮರಳು ಮಣ್ಣು ಪಿರಿಯಾಪಟ್ಟಣ, ಹೆಗ್ಗಡದೇವನ ಕೋಟೆ ಮತ್ತು ಹುಣಸೂರು ತಾಲ್ಲೂಕುಗಳಲ್ಲಿ ಕಂಡುಬರುತ್ತದೆ. ಸಾರಜನಕ ಪೋಷಕಾಂಶ ಮಣ್ಣು ಅನೇಕ ತಾಲ್ಲೂಕುಗಳಲ್ಲಿ ಕಂಡುಬರುತ್ತದೆ.

ಸಸ್ಯವರ್ಗ : ಹೆಚ್ಚಿನ ಸಸ್ಯ ಸಂಪತ್ತು ಹೆಗ್ಗಡದೇವನಕೋಟೆ, ಹುಣಸೂರು ತಾಲ್ಲೂಕುಗಳಲ್ಲಿ ಕೇಂದ್ರೀಕೃತಗಳಾಗಿದೆ. ಈ ಭಾಗದಲ್ಲಿ ಹೆಚ್ಚು ಕಾಡುಗಳು ಮತ್ತು ಹುಲ್ಲುಗಾವಲು ಪ್ರದೇಶಗಳು ಕಂಡುಬರುತ್ತವೆ. ಇಲ್ಲಿಯ ಕಾಡುಗಳಲ್ಲಿ ತೇಗ, ಗಂಧ, ಬೀಟೆ, ನಂದಿ, ಹೊನ್ನೆ, ಮತ್ತಿ, ಎತ್ತಿಗ, ಹಡಗು ಮುಂತಾದ ಸಾಗುವಾನಿ ಮರಗಳಲ್ಲದೆ ಬೆಂಕಿಪೊಟ್ಟಣ ಕೈಗಾರಿಕೆಗೆ ಬೇಕಾದ ಮೃದುಮರ, ಬಿದಿರು, ಅರಗು, ಗೋಂದು, ಮುಂತಾದವು ದೊರಕುವುವು. ಅಲ್ಲದೇ ಜಿಲ್ಲೆಯ ಕೆಲವು ಭಾಗಗಳಲ್ಲಿ ನೀಲಗಿರಿ, ತೇಗ, ಗೋಡಂಬಿ ಮುಂತಾದ ಸಸಿಗಳನ್ನು ನೆಟ್ಟು ಪ್ಲಾಂಟೇಷನ್‍ಗಳನ್ನು ಬೆಳೆಸಿದ್ದಾರೆ. ಹುಣಸೆ, ಹೊಂಗೆ ಮತ್ತು ಬಾಬುಲ್ ಮರದ ತೋಪುಗಳನ್ನೂ ಕಾಣಬಹುದು. 

ಜಿಲ್ಲೆಯಲ್ಲಿ ಚಾಮರಾಜನಗರ, ಮೈಸೂರು ಮತ್ತು ಹುಣಸೂರು ಎರಡು ಮುಖ್ಯ ಅರಣ್ಯ ಭಾಗಗಳು. ಅರಣ್ಯ ಸಂಪತ್ತಿನಲ್ಲಿ ಮೈಸೂರು ಜಿಲ್ಲೆ ರಾಜ್ಯದಲ್ಲಿ 3ನೆಯ ಸ್ಥಾನ ಪಡೆದಿದೆ. ಜಿಲ್ಲೆಯ ಅನೇಕ ಕೈಗಾರಿಕೆಗಳಿಗೆ ಇಲ್ಲಿಯ ಅರಣ್ಯಗಳು ಕಚ್ಚಾ ಸಾಮಗ್ರಿಗಳನ್ನು ಒದಗಿಸುತ್ತವೆ.

ಪ್ರಾಣಿಸಂಪತ್ತು : ಜಾನುವಾರು ಸಂಪತ್ತಿನಲ್ಲಿ ಈ ಜಿಲ್ಲೆ ಉತ್ತಮ ಮಟ್ಟದಲ್ಲಿದೆ. ಕುರಿ ಸಾಕಾಣಿಕೆ ಜಿಲ್ಲೆಯ ಆರ್ಥಿಕಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುತ್ತದೆ. ಬನ್ನೂರು ತಳಿ ಕುರಿಗಳು ಪ್ರಸಿದ್ಧವಾದವು. ದನಸಾಕಣೆ ಮೊದಲನೆಯ ಸ್ಥಾನವನ್ನೂ ಮೇಕೆ-ಕುರಿ ಸಾಕಣೆ ಎರಡನೆಯ ಸ್ಥಾನದಲ್ಲೂ ಇವೆ. ಹಂದಿ, ಕೋಳಿ ಮುಂತಾದವುಗಳ ಸಾಕಾಣೆಯೂ ಮತ್ಸೋದ್ಯಮವೂ ಇದೆ. ಅರಣ್ಯಗಳಲ್ಲಿ ಹುಲಿ, ಜಿಂಕೆ, ಕಾಡುಕೋಣ, ಆನೆ, ಕರಡಿ, ಮುಂತಾದ ಪ್ರಾಣಿಗಳೂ ನಾನಾ ಬಗೆಯ ಪಕ್ಷಿಗಳೂ ಉರಗಗಳೂ ಇವೆ. ವನ್ಯಮೃಗ ಸಂರಕ್ಷಣಾ ಕೇಂದ್ರಗಳಿವೆ.

ಖನಿಜ ಸಂಪತ್ತು : ಈ ಜಿಲ್ಲೆಯ ಪಶ್ಚಿಮ, ದಕ್ಷಿಣ ಮತ್ತು ಆಗ್ನೇಯ ಭಾಗಗಳಲ್ಲಿ ಚಾರ್ನೊಕೈಟ್ ಶಿಲೆಗಳಿವೆ. ಉಳಿದಭಾಗ ಕಣಶಿಲೆಗಳ ಪ್ರದೇಶ. ಅಲ್ಲಲ್ಲಿ ಹಾರ್ನ್‍ಬ್ಲೆಂಡ್ ಪೈರಾಕ್ಸೆನೈಟ್ ಮಾನೈಟ್ ಈ ಶಿಲಾರಚನೆಗಳಿಂದ ಕೂಡಿದ್ದು ಅನೇಕಬಗೆಯ ಖನಿಜಗಳು ದೊರಕುತ್ತವೆ. ಕ್ರೋಮೈಟ್, ತಾಮ್ರ, ಕೊರಂಡಮ್, ಗಾರ್ನೈಟ್, ಚಿನ್ನ, ಗ್ರಾಫೈಟ್, ಕಬ್ಬಿಣದ ಅದುರು, ಕಯನೈಟ್, ಸಿಲಿಮನೈಟ್, ಸುಣ್ಣಕಲ್ಲು, ಡಾಲೋಮೈಟ್, ಬಳಪದ ಕಲ್ಲು, ವರ್ಮಿಕುಲೈಟ್, ಅಲಂಕರಣ ಹಾಗೂ ಕಟ್ಟಡದ ಶಿಲೆಗಳು ಕಲ್ನಾರು ಮುಂತಾದ ಖನಿಜಗಳನ್ನು ಒಳಗೊಂಡಿದೆ.

ನೀರಾವರಿ : ಜಿಲ್ಲೆಯಲ್ಲಿ ಕಾಲುವೆ, ಕೆರೆ, ಬಾವಿಗಳಿದ್ದು ಹೆಚ್ಚುಭಾಗದಲ್ಲಿ ನೀರಾವರಿ ಸೌಲಭ್ಯವಿದೆ. ನಂಜನಗೂಡು, ಟಿ. ನರಸೀಪುರ, ಕೆ. ಆರ್. ನಗರ ತಾಲ್ಲೂಕುಗಳ ಶೇಕಡಾ 82.8 ಭೂಮಿ ನೀರಾವರಿಗೆ ಒಳಪಟ್ಟಿದೆ. ಹೆಗ್ಗಡದೇವನ ಕೋಟೆ ತಾಲ್ಲೂಕಿನಲ್ಲೂ ಕಾಲುವೆ ನೀರಾವರಿ ಅಭಿವೃದ್ಧಿಗೊಳ್ಳುತ್ತಿದೆ. ಉಳಿದ ತಾಲ್ಲೂಕುಗಳಲ್ಲಿ ಬಾವಿ ಮತ್ತು ಕೆರೆ ನೀರಾವರಿಯಿದೆ. ಜಿಲ್ಲೆಯಲ್ಲಿ ಸಾಗುವಳಿಯಾಗುವ ಒಟ್ಟು ಭೂಮಿಯ ಶೇಕಡಾ 18 ರಷ್ಟು ಭೂಮಿ ನೀರಾವರಿಗೆ ಸೇರಿದೆ. ಕಪಿಲಾ, ಹಾರಂಗಿ, ನುಗು ಮತ್ತು ತಾರಕಾ ಯೋಜನೆಗಳಿಂದ ಈ ಜಿಲ್ಲೆಯ ನೀರಾವರಿಗೆ ಹೆಚ್ಚು ಭೂಮಿ ಸೇರಿದೆ. ಇವಲ್ಲದೇ ಗುಂಡಾಲಯೋಜನೆ, ಸುವರ್ಣಾವತಿಯೋಜನೆ ಮುಂತಾದವುಗಳ ಜೊತೆಗೆ ಅನೇಕ ಸಣ್ಣ ನೀರಾವರಿ ಯೋಜನೆಗಳನ್ನು ಕೈಗೊಂಡಿದೆ. ಕೊಡಗು ಜಿಲ್ಲೆಯ ಹಾರಂಗಿ ಮತ್ತು ಹೇಮಾವತಿ ಯೋಜನೆಗಳಿಂದಲೂ ಈ ಜಿಲ್ಲೆಗೆ ನೀರಾವರಿ ಸೌಲಭ್ಯ ಸಿಗುತ್ತದೆ. 

ಕೃಷಿ : ಮೈಸೂರು ವ್ಯವಸಾಯ ಪ್ರಧಾನ ಜಿಲ್ಲೆ. ಜಿಲ್ಲೆಯ ಹೆಚ್ಚು ಭಾಗದ ಬೇಸಾಯ ಮಳೆಯನ್ನು ಅವಲಂಬಿಸಿದೆ. ಜಿಲ್ಲೆಯಲ್ಲಿ ಬೆಳೆಯುವ ಮುಖ್ಯ ಆಹಾರ ಬೆಳೆಗಳೆಂದರೆ, ಭತ್ತ, ರಾಗಿ, ಜೋಳ ಮತ್ತು ಕಡಲೆ, ಹುರುಳಿ, ಹಲಸಂದೆ, ತೊಗರಿ ಮುಂತಾದವು. ವಾಣಿಜ್ಯ ಬೆಳೆಗಳಲ್ಲಿ ಹತ್ತಿ, ಹೊಗೆಸೊಪ್ಪು, ಕಬ್ಬು ಮತ್ತು ನೆಲಗಡಲೆ, ಹರಳು ಮುಂತಾದ ಎಣ್ಣೆಬೀಜಗಳು ಮುಖ್ಯವಾದವು ; ಜಿಲ್ಲೆಯ ಹೆಚ್ಚು ಪ್ರದೇಶದಲ್ಲಿ ಅಧಿಕ ಇಳುವರಿಯ ಹೈಬ್ರಿಡ್ ಬಿತ್ತನೆಗಳನ್ನು ಬಳಕೆಗೆ ತರಲಾಗಿದೆ. ನೀರಾವರಿ ಪ್ರದೇಶಗಳಲ್ಲಿ ಸುಧಾರಿತ ಬಿತ್ತನೆ ಬೀಜಗಳಿಂದ ಸಾಂದ್ರಬೇಸಾಯ ಪದ್ಧತಿಯನ್ನು ಜಾರಿಗೆ ತರಲಾಗಿದೆ. ಅಲ್ಲದೆ ಸಸ್ಯಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಮತ್ತು ನುಗು ಈ ಪ್ರದೇಶದಲ್ಲಿ ಮೂರು ಕೃಷಿ ತರಬೇತಿ ಕೇಂದ್ರ ತೆರೆಯಲಾಗಿದೆ.
ಗೃಹ ಕೈಗಾರಿಕೆಗಳಲ್ಲಿ ರೇಷ್ಮೆ ಮುಖ್ಯವಾದುದು. ರಾಜ್ಯದ ಒಟ್ಟು ಹಿಪ್ಪುನೇರಳೆ ಬೆಳೆಯುವ ಪ್ರದೇಶದ ಶೇಕಡಾ ಸುಮಾರು 60 ರಷ್ಟು ಪ್ರದೇಶ ಈ ಜಿಲ್ಲೆಯೊಂದರಲ್ಲೇ ಇದ್ದು ನಂಜನಗೂಡು ಉಪವಿಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮೈಸೂರಿನಲ್ಲಿ ಕೇಂದ್ರೀಯ ರೇಷ್ಮೆ ಸಂಶೋಧನಾಲಯವಿದೆ. ಈ ಜಿಲ್ಲೆಯಲ್ಲಿ ಪಪ್ಪಾಯಿ, ನಿಂಬೆ, ಸಪೋಟ, ಸೀಬೆ, ಹಲಸು, ಬಾಳೆ, ಮಾವು ಮುಂತಾದ ಹಣ್ಣುಗಳನ್ನೂ ಮಲ್ಲಿಗೆ, ಗುಲಾಬಿ, ಸಂಪಿಗೆ, ಜಾಜಿ ಮುಂತಾದ ಹೂವುಗಳನ್ನು ಬೆಳೆಸುತ್ತಾರೆ. ನಂಜನಗೂಡಿನ ರಸಬಾಳೆ, ಮೈಸೂರು ಮಲ್ಲಿಗೆ ಪ್ರಸಿದ್ಧವಾದವು. 

ಕೈಗಾರಿಕೆ : ಜಿಲ್ಲೆಯಲ್ಲಿ ವಿವಿಧ ಕೈಗಾರಿಕೆಗಳು ಇದ್ದು ಗಣನೀಯ ಪ್ರಗತಿಯನ್ನು ಸಾಧಿಸಿವೆ. ಇಲ್ಲಿಯ ಖಾಸಗಿ ಮತ್ತು ಸರ್ಕಾರಿ ಕ್ಷೇತ್ರಗಳೆರಡರಲ್ಲೂ ದೊಡ್ಡ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕೆಗಳಿವೆ. 

ಸರ್ಕಾರಿ ಕ್ಷೇತ್ರದಲ್ಲಿ ಮೈಸೂರು, ಟಿ. ನರಸೀಪುರ ಮಾಂಬಳ್ಳಿ ಇವುಗಳಲ್ಲಿ ಗಂಧದ ಎಣ್ಣೆ, ರೇಷ್ಮೆ ಬಟ್ಟೆ, ರೇಷ್ಮೆನೂಲು, ಅರಗು ಮತ್ತು ಬಣ್ಣದ ಕಾರ್ಖಾನೆಗಳಿವೆ. ಮೈಸೂರು ತಾಲ್ಲೂಕು ಒಂದರಲ್ಲೇ 28,938, (95-96) ಜನ ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ.

ಮೈಸೂರು, ನಂಜನಗೂಡು, ಹುಣಸೂರು - ಇಲ್ಲಿ ಖಾಸಗೀ ಕೈಗಾರಿಕೆಗಳಿವೆ. ಅವುಗಳಲ್ಲಿ ಕೃಷ್ಣರಾಜೇಂದ್ರ ಗಿರಣಿ, ಸೌತ್ ಇಂಡಿಯ ಪೇಪರ್ ಮಿಲ್ಸ್, ಶ್ರೀ ಗಜಾನನ ರೈಸ್ ಅಂಡ್ ಆಯಿಲ್ ಮಿಲ್, ಮೈಸೂರು ಚಿಪ್‍ಬೋಡ್ರ್ಸ್ ಲಿಮಿಟೆಡ್, ಸುನಂದ ಅಗರಬತ್ತಿ, ಸುಜಾತ ಬಟ್ಟೆ ಗಿರಣಿ, ಹುಣಸೂರು ಪ್ಲೈವುಡ್ (ನಿಯಮಿತ), ವಿಕ್ರಾಂತ್ ಟೈರ್ ಕಾರ್ಖಾನೆ ಮುಂತಾದವುಗಳನ್ನು ಹೆಸರಿಸಬಹುದು. ಇದಲ್ಲದೆ ಜಿಲ್ಲೆಯಲ್ಲಿ ಬತ್ತದ ಮಿಲ್ಲುಗಳಿವೆ. ಹಾಗೂ ನೂಲು ತೆಗೆಯುವ ಸುಗಂಧ ಎಣ್ಣೆಗಳ ತಯಾರಿಕೆಯ ಮತ್ತು ದನಗಳ ಮೇವಿನ ಕೈಗಾರಿಕೆಗಳಿವೆ. ನಗರದ ಸುತ್ತ ಅನೇಕ ಹೊಸ ಕೈಗಾರಿಕೆಗಳು ಸ್ಥಾಪನೆಗೊಂಡಿದ್ದು ನಗರ ವಿಸ್ತೀರ್ಣವೂ ಬೆಳೆಯುತ್ತಿದೆ.

ಮೈಸೂರು ಜಿಲ್ಲೆಯಲ್ಲಿ 15 ದೊಡ್ಡ ವೈದ್ಯಕೀಯ ಸಂಸ್ಥೆಗಳು ಮತ್ತು ಕೃಷ್ಣ ರಾಜೇಂದ್ರ ಆಸ್ಪತ್ರೆಯಲ್ಲದೇ, ವೈದ್ಯಕೀಯ ಮತ್ತು ಆರೋಗ್ಯ ಸಂಸ್ಥೆಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಅವುಗಳಿಗೆ ಲಗತ್ತಿಸಿದಂತೆ ಕುಟುಂಬ ಕಲ್ಯಾಣ ಕೇಂದ್ರಗಳಿವೆ. ಹೆರಿಗೆ ಮತ್ತು ಮಕ್ಕಳ ಕಲ್ಯಾಣ ಕೇಂದ್ರಗಳು ಇವುಗಳಿಗೆ ಸೇರಿದ ಉಪಕೇಂದ್ರಗಳಿವೆ. ಇವುಗಳಲ್ಲದೇ ಗ್ರಾಮೀಣ ಮತ್ತು ನಗರ ಆಸ್ಪತ್ರೆಗಳಿವೆ. ಜಿಲ್ಲೆಯಲ್ಲಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆಗಳಿದ್ದು ವೈದ್ಯಕೀಯ ಸೌಲಭ್ಯಗಳಿವೆ.

ಶಿಕ್ಷಣ : ಈ ಜಿಲ್ಲೆಯಲ್ಲಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳೂ ಮತ್ತು ಪ್ರೌಢಶಾಲೆಗಳೂ ಪ್ರಥಮ ದರ್ಜೆ ಕಾಲೇಜುಗಳು ತಾಂತ್ರಿಕ ಕಾಲೇಜುಗಳೂ 2 ವೈದ್ಯಕೀಯ ಕಾಲೇಜುಗಳೂ 2 ಆಯುರ್ವೇದ ಕಾಲೇಜು 2 ಸಂಸ್ಕøತ ಪಾಠ ಶಾಲೆಗಳೂ ಜೊತೆಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರ ತರಬೇತಿ ಕೇಂದ್ರಗಳೂ ಹಾಗೂ ವೃತ್ತಿ ಶಿಕ್ಷಣ ಶಾಲೆಗಳೂ ಇವೆ. ಜೊತೆಗೆ ಮೈಸೂರು ವಿಶ್ವವಿದ್ಯಾನಿಲಯ ಮತ್ತು ಅದಕ್ಕೆ ಸೇರಿದ ಮಾನಸ ಗಂಗೋತ್ರಿ ಸ್ನಾತಕೋತ್ತರ ಶಿಕ್ಷಣ ಕೇಂದ್ರವಿದೆ. ಜಿಲ್ಲೆಯ ವಿದ್ಯಾಭ್ಯಾಸ ಅಭಿವೃದ್ಧಿಯಲ್ಲಿ ಇಲ್ಲಿಯ ಖಾಸಗೀ ಸಂಘಸಂಸ್ಥೆಗಳ ಸೇವೆ ಗಣನೀಯವಾದದ್ದು. 

ಸಾರಿಗೆ ಸಂಪರ್ಕ : ಈ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕದೊಂದಿಗೆ ರಾಜ್ಯದ ಹೆದ್ದಾರಿಗಳ ಸಂಪರ್ಕವಿದೆ. ಇವುಗಳಲ್ಲದೆ ಜಿಲ್ಲಾ ರಸ್ತೆಗಳು, ತಾಲ್ಲೂಕ್ ಮಂಡಲಿ ರಸ್ತೆಗಳು, ಗ್ರಾಮೀಣ ಸಂಪರ್ಕ ರಸ್ತೆಗಳೂ ಇವೆ. ಇಲ್ಲಿಂದ ಮೈಸೂರು-ಬೆಂಗಳೂರು, ಮೈಸೂರು-ಅರಸೀಕೆರೆ, ಮೈಸೂರು-ಚಾಮರಾಜನಗರ ರೈಲು ಸಂಪರ್ಕವಿದೆ. 

ಈ ಜಿಲ್ಲೆಯಲ್ಲಿ ವಿದ್ಯುತ್ತನ್ನು ಕೈಗಾರಿಕೆ, ಬೇಸಾಯ ಮತ್ತು ಗೃಹಬಳಕೆ ಮುಂತಾದ ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇತ್ತೀಚೆಗೆ ನೀರಾವರಿ ಪಂಪು ಸೆಟ್ಟುಗಳಿಗಾಗಿ ವಿದ್ಯುತ್ತಿನ ಬೇಡಿಕೆ ಅಧಿಕಗೊಂಡಿದೆ. ಈ ಜಿಲ್ಲೆಯ ಪಟ್ಟಣಗಳು ಮತ್ತು ಅನೇಕ ಗ್ರಾಮಗಳು ವಿದ್ಯುತ್ತಿನ ಸೌಲಭ್ಯ ಪಡೆದಿವೆ.

ಮಾರುಕಟ್ಟೆ ವ್ಯವಸ್ಥೆ : ಒಂದು ಪ್ರದೇಶದ ಆರ್ಥಿಕಾಭಿವೃದ್ಧಿಯಲ್ಲಿ ಮಾರುಕಟ್ಟೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಜಿಲ್ಲೆಯ ಮೈಸೂರು, ಕೆ. ಆರ್. ನಗರ ಮತ್ತು ನಂಜನಗೂಡುಗಳಲ್ಲಿ ಕೃಷಿಮಾರುಕಟ್ಟೆಗಳಿವೆ. ಜೊತೆಗೆ ಅಧಿಕಸಂಖ್ಯೆಯ ಸರ್ಣಣ ಮಾರುಕಟ್ಟೆಗಳೂ ಸಂತೆಗಳೂ ಇವೆ. ಮೈಸೂರಿನ ನಿಯಂತ್ರಿತ ಮಾರುಕಟ್ಟೆ ಎಲ್ಲಾ ಸೌಕರ್ಯಗಳನ್ನು ಹೊಂದಿದೆ. ಜಿಲ್ಲೆಯ ಅಧಿಕ ಉತ್ಪಾದನಾ ಸಾಮಗ್ರಿಗಳು ವಾರಕ್ಕೊಮ್ಮೆ ನಡೆಯುವ ಸುಮಾರು 28 ಸಂತೆಗಳಲ್ಲಿ ವಿಲೇವಾರಿಯಾಗುತ್ತವೆ. ಹೆಚ್ಚುವರಿ ಸಾಮಗ್ರಿಗಳನ್ನು ಸುತ್ತಮುತ್ತಲಿನ ಜಿಲ್ಲೆಗಳಿಗೆ ಬೇಡಿಕೆಯ ಮೇಲೆ ಕಳಿಸುವುದುಂಟು. ಬತ್ತ, ರಾಗಿ, ಜೋಳ, ತೆಂಗು ಬೆಲ್ಲ, ಹೊಂಗೆ ಮತ್ತು ಬೇವಿನಎಣ್ಣೆ ಮುಂತಾದವು ರಫ್ತಾಗುತ್ತವೆ. ಬತ್ತ ಮತ್ತು ಎಣ್ಣೆ ಸಂಸ್ಕರಣ ಘಟಕಗಳಿವೆ. ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ ಹೆಚ್ಚು ತಂಬಾಕು ಬೆಳೆಯುವುದರಿಂದ ಅಲ್ಲಿ ಅದರ ಸಂಸ್ಕರಣ ಮತ್ತು ಮಾರುಕಟ್ಟೆ ಸಹಕಾರಿ ಸಂಘಗಳಿಂದ ನಡೆಯುತ್ತಿದೆ.

	ಆರ್ಥಿಕ ವ್ಯವಸ್ಥೆ : ಮೈಸೂರು ಜಿಲ್ಲೆಯಲ್ಲಿ ಅನೇಕ ವಾಣಿಜ್ಯ, ಜಿಲ್ಲಾ ಸಹಕಾರ, ಭೂ ಅಭಿವೃದ್ಧಿ ಮುಂತಾದ ಬ್ಯಾಂಕುಗಳಿವೆ. ಇವು ಜಿಲ್ಲೆಯ ಕೈಗಾರಿಕೆಗಳಿಗೆ ಮತ್ತು ವಿವಿಧ ಕಸಬುದಾರರಿಗೆ ಆರ್ಥಿಕ ಸಹಕಾರ ನೀಡುವುವು.

	ಪ್ರವಾಸ್ಯೋದ್ಯಮ : ಮೈಸೂರು ಜಿಲ್ಲೆಯ ಸುತ್ತಲೂ ಕೆಲವು ಪ್ರವಾಸೀ ಕೇಂದ್ರಗಳಿವೆ. ಅವುಗಳಲ್ಲಿ ವೇಣುಗೋಪಾಲ ವನ್ಯಮೃಗ ವಿಹಾರೋದ್ಯಾನವಿರುವ ಬಂಡೀಪುರ, ಕಾವೇರಿಯಿಂದ ಸುತ್ತುವರಿಯಲ್ಪಟ್ಟ ಐತಿಹಾಸಿಕ ದ್ವೀಪ ಶ್ರೀರಂಗಪಟ್ಟಣ, ಇಲ್ಲಿಯ ರಂಗನಾಥಸ್ವಾಮಿ ದೇವಸ್ಥಾನ, ಮಸೀದಿ, ದರಿಯಾ ದೌಲತ್, ಟಿಪ್ಪುವಿನ ಅರಮನೆ ಮತ್ತು ಆತನ ಗೋರಿಯನ್ನು ಒಳಗೊಂಡ ಗುಂಬಜ್ ಮುಂತಾದವು ಪ್ರವಾಸಿಗರಿಗೆ ಆಕರ್ಷಣೀಯವಾಗಿವೆ. ಕಾವೇರಿಯಿಂದ ಸುತ್ತುವರಿದ ರಂಗನತಿಟ್ಟು ಒಂದು ದ್ವೀಪ. ಇಲ್ಲಿ ಖಂಡಾಂತರಗಳಿಂದ ಬರುವ ವೈವಿಧ್ಯಮಯ ಪಕ್ಷಿ ಸಂಕುಲ ಕಾಣಬಹುದು. ಈ ಪಕ್ಷಿಧಾಮದಲ್ಲಿ ದೋಣಿ ವಿಹಾರದ ಸೌಲಭ್ಯವೂ ಉಂಟು.

	ಹೊಯ್ಸಳ ಶಿಲ್ಪಕಲೆ ಕ್ಷೇತ್ರವಾದ ಸೋಮನಾಥಪುರದಲ್ಲಿ ಪ್ರಸಿದ್ಧ ಸೋಮನಾಥ ದೇವಾಲಯವಿದೆ.	
	ಯಾತ್ರಾಸ್ಥಳ ಮೇಲುಕೋಟೆ, ಇಲ್ಲಿ ಶ್ರೀ ವೈಷ್ಣವ ಪಂಥದ ಶ್ರೀರಾಮಾನುಜಾಚಾರ್ಯರು ಕೆಲವು ಕಾಲ ಇದ್ದರೆಂದು ಪ್ರತೀತಿ. ದ್ರಾವಿಡಶೈಲಿಯಲ್ಲಿ ನಿರ್ಮಿಸಿರುವ ಚೆಲುವರಾಯ ಸ್ವಾಮಿಯ ದೇವಸ್ಥಾನ, ನಾರಾಯಣ ಮತ್ತು ಯೋಗಾನರಸಿಂಹರ ದೇವಸ್ಥಾನಗಳಿವೆ. ಕಬಿನಿ ನದಿಯ ದಡದ ಮೇಲಿರುವ ನಂಜನಗೂಡಿನಲ್ಲಿ ನಂಜುಡೇಶ್ವರನ ದೇವಸ್ಥಾನವಿದೆ. ಮೈಸೂರು ನಗರವೇ ಒಂದು ಪ್ರವಾಸಿ ಆಕರ್ಷಣ ತಾಣವಾಗಿದೆ.

	ತಾಲ್ಲೂಕು : ಜಿಲ್ಲೆಯ ಉತ್ತರಭಾಗದಲ್ಲಿರುವ ಈ ತಾಲ್ಲೂಕನ್ನು ವಾಯವ್ಯದಲ್ಲಿ ಕೃಷ್ಣರಾಜನಗರ, ಉತ್ತರದಲ್ಲಿ ಪಾಂಡವಪುರ ಮತ್ತು ಶ್ರೀರಂಗಪಟ್ಟಣ, ಪೂರ್ವದಲ್ಲಿ ತಿರುಮಕೂಡಲು ನರಸೀಪುರ, ದಕ್ಷಿಣದಲ್ಲಿ ನಂಜನಗೂಡು, ಪಶ್ಚಿಮದಲ್ಲಿ ಹುಣಸೂರು ಮತ್ತು ಹೆಗ್ಗಡೆದೇವನ ಕೋಟೆ ತಾಲ್ಲೂಕುಗಳು ಸುತ್ತುವರಿದಿವೆ. ಜಯಪುರ, ವರುಣ, ಇಲವಾಲ ಮತ್ತು ಮೈಸೂರು ಹೋಬಳಿಗಳು. ಉತ್ತರ ಅಕ್ಷಾಂಶ 120 18" ಪೂರ್ವ ರೇಖಾಂಶ 760 42" ನಲ್ಲಿರುವ ಈ ತಾಲ್ಲೂಕು ವಿಸ್ತೀರ್ಣ 815.6 ಚಕಿಮೀ. ಜನಸಂಖ್ಯೆ 10,24,410 (2001). ಇದರ ಆಡಳಿತ ಕೇಂದ್ರ ಮೈಸೂರು ನಗರ.

	ಈ ತಾಲ್ಲೂಕು ಅಸಮ ಇಳಿಜಾರಿನ ಬಯಲುಪ್ರದೇಶವಾಗಿದೆ. ಬೆಟ್ಟದಹಳ್ಳಿ ಭಾಗದಲ್ಲಿ ಗುಡ್ಡಗಳು ಹೆಚ್ಚಾಗಿವೆ. ತಾಲ್ಲೂಕಿನಲ್ಲಿರುವ ಬೆಟ್ಟಗಳಲ್ಲಿ ಚಾಮುಂಡಿ ಬೆಟ್ಟ (1063 ಮೀ) ಮುಖ್ಯವಾದದ್ದು.  ಈ ತಾಲ್ಲೂಕಿನ ಪೂರ್ವ ಮತ್ತು ಉತ್ತರದಲ್ಲಿ ಕಾವೇರಿ ನದಿ, ದಕ್ಷಿಣದಲ್ಲಿ ಕಬಿನಿ ನದಿ ಇವೆಯಾದರೂ ತಾಲ್ಲೂಕಿನ ಸರಹದ್ದಿಗೆ ಇವು ಒಳಪಟ್ಟಿಲ್ಲ. ತಾಲ್ಲೂಕಿನ ವಾಯುಗುಣ ಹಿತಕರ. ವಾರ್ಷಿಕ ಸರಾಸರಿ ಮಳೆ ಸುಮಾರು 834.80ಮಿಮೀ. ತಾಲ್ಲೂಕಿನಲ್ಲಿ ಅರಣ್ಯ ಪ್ರದೇಶವಿಲ್ಲ. ಸೌದೆಗಾಗಿ ಉಪಯೋಗಿಸುವ ಸಣ್ಣ ಗಿಡಮರಗಳು ಮತ್ತು ಪೋದೆಗಳು ಕಂಡು ಬರುತ್ತವೆ. ನೀಲಗಿರಿ ಮರಗಳ ಪ್ಲಾಂಟೇಷನ್‍ಗಳು ಮತ್ತು ಇತರ ಮಿಶ್ರ ಜಾತಿಯ ಹೊಂಗೆ ಹುಣಿಸೆ, ಬನ್ನಿ ಮತ್ತು ಬಾಬುಲ್ ಮುಂತಾದ ಮರಗಳು ಕಂಡುಬರುತ್ತವೆ.

	ಬತ್ತ, ರಾಗಿ, ಜೋಳ, ಹೊಗೆಸೊಪ್ಪು, ಕಡಲೆಕಾಯಿ, ಹತ್ತಿ ಎಣ್ಣೆಬೀಜ ತಾಲ್ಲೂಕಿನ ಮುಖ್ಯ ಬೆಳೆಗಳು, ಕಬ್ಬು, ಹಿಪ್ಪುನೇರಳೆ ವಾಣಿಜ್ಯ ಬೆಳೆಗಳು, ಇಲ್ಲಿ ದನ, ಕುರಿ, ಎಮ್ಮೆ, ಮೇಕೆ ಮುಂತಾದ ಜಾನುವಾರು ಸಂಪತ್ತು ಇದೆ. ಕೋಳಿ ಸಾಕಾಣಿಕೆಯಲ್ಲಿ ಪ್ರಥಮ ಸ್ಥಾನಪಡೆದಿದೆ. 18 ಪಶುವೈದ್ಯಶಾಲೆಗಳಿವೆ.

	ಈ ತಾಲ್ಲೂಕಿನಲ್ಲಿ ದೊಡ್ಡ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳೂ ಕೈಮಗ್ಗಗಳೂ ಸಣ್ಣಪ್ರಮಾಣದ ಕೈಗಾರಿಕೆಗಳೂ ಇವೆ. ಹೆಚ್ಚು ಕೈಗಾರಿಕೆಗಳು ಮೈಸೂರು ನಗರ ಮತ್ತು ಅದರ ಸುತ್ತಮುತ್ತ ಕೇಂದ್ರಿಕೃತವಾಗಿವೆ.
ಈ ತಾಲ್ಲೂಕಿಗೆ ರಸ್ತೆ ಮತ್ತು ರೈಲುಮಾರ್ಗಗಳ ಸಂಪರ್ಕವಿದೆ. 1,408 ಕಿಮೀ ಉದ್ದದ ಸಾರ್ವಜನಿಕ ಕಾಮಗಾರಿಕಾ ಇಲಾಖೆಯ ರಸ್ತೆಗಳೂ 36 ಕಿಮೀ ರೈಲು ಮಾರ್ಗವೂ ಉಂಟು. ಇಲ್ಲಿಂದ ನಂಜನಗೂಡು, ಚಾಮರಾಜನಗರ, ಅರಸೀಕೆರೆ ಮತ್ತು ಬೆಂಗಳೂರುಗಳೊಡನೆ ರೈಲು ಸಂಪರ್ಕ ಇದೆ. ಆಕಾಶವಾಣಿ ಕೇಂದ್ರ ಇದೆ.

ತಾಲ್ಲೂಕಿನ ವ್ಯಾಪಾರ ವಾಣಿಜ್ಯಕ್ಕೆ ಆರ್ಥಿಕ ಅನುಕೂಲತೆ ಸಹಕಾರ ನೀಡಲು ಅನೇಕ ವಾಣಿಜ್ಯ, ಸಹಕಾರ ಬ್ಯಾಂಕುಗಳಿವೆ. ಭೂ ಅಭಿವೃದ್ಧಿ ಬ್ಯಾಂಕೂ ಇದೆ. ಮೈಸೂರು ವಿಶ್ವವಿದ್ಯಾನಿಲಯದ ಕಾಲೇಜುಗಳೂ ಸ್ನಾತಕೋತ್ತರ ಶಿಕ್ಷಣಕೇಂದ್ರ ಮಾನಸಗಂಗೋತ್ರಿ, ಇವುಗಳ ಜೊತೆಗೆ ವಿವಿಧ ಶಾಲಾ ಕಾಲೇಜುಗಳೂ ವೃತ್ತಿಶಿಕ್ಷಣ ಶಾಲೆಗಳೂ ವೈದ್ಯಕೀಯ, ಎಂಜಿನಿಯರಿಂಗ್, ವಾಣಿಜ್ಯ, ಕಾನೂನು ಕಾಲೇಜುಗಳೂ ಇದ್ದು ತಾಲ್ಲೂಕುಗಳಲ್ಲಿ ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. ಈ ತಾಲ್ಲೂಕಿನಲ್ಲಿ ಜಿಲ್ಲಾ ಹಾಗು ತಾಲ್ಲೂಕು ಸರ್ಕಾರಿ ಆಡಳಿತ ಕಚೇರಿಗಳಿವೆ. ಜಿಲ್ಲಾ ನ್ಯಾಯಾಲಯಗಳೂ ಕೇಂದ್ರ ಸರ್ಕಾರದ ಕೆಲವು ಆಡಳಿತ ಕಚೇರಿಗಳೂ ಇಲ್ಲಿವೆ.
ನಗರ : ಮೈಸೂರು ವಿಭಾಗ, ಜಿಲ್ಲೆ ಮತ್ತು ತಾಲ್ಲೂಕಿನ ಹಾಗೂ ಹೋಬಳಿಯ ಆಡಳಿತ ಕೇಂದ್ರ. ಕರ್ನಾಟಕದ ರಾಜಧಾನಿ ಬೆಂಗಳೂರಿಗೆ 138 ಕಿಮೀ ದೂರದಲ್ಲಿವೆ. ನಗರ ವಿಸ್ತೀರ್ಣ 37.30 ಚಕಿಮೀ ಇದ್ದದ್ದು ಹೊಸ ಕೈಗಾರಿಕೆಗಳ ಸ್ಥಾಪನೆಯಿಂದಾಗಿ ಅನೇಕ ಹೊಸ ಬಡಾವಣೆಗಳು ನಿರ್ಮಾಣಗೊಂಡು ವಿಸ್ತೀರ್ಣ ಮತ್ತು ಜನಸಂಖ್ಯೆ ಹೆಚ್ಚಿದೆ. ನಗರ ಜನಸಂಖ್ಯೆ 7,85,800 (2001). ನಗರ ಸಮುದ್ರ ಮಟ್ಟದಿಂದ 763 ಮೀಟರ್ ಎತ್ತರದಲ್ಲಿದೆ. ಉತ್ತರಕ್ಕೆ ಅಕ್ಷಾಂಶ 120 18' ನಿಂದ ಪೂರ್ವರೇಖಾಂಶ 760 12' ಎತ್ತರದಲ್ಲಿದೆ. ಸುತ್ತಲೂ ದಿಣ್ಣೆಯಂತಹ ಪ್ರದೇಶದಿಂದ ಮತ್ತು ಆಗ್ನೇಯದಲ್ಲಿ ಚಾಮುಂಡಿ ಬೆಟ್ಟದಿಂದ ಅಮೃತವಾಗಿರುವ ನಗರದ ಹವೆ ಮಾರ್ಚಿ, ಏಪ್ರಿಲ್ ಮತ್ತು ಮೇ ತಿಂಗಳು ಬಿಟ್ಟು ಮಿಕ್ಕ ಕಾಲದಲ್ಲಿ ತಂಪಾಗಿರುತ್ತದೆ.
ಶಿಕ್ಷಣ : ನಾಡಿನ ಸಾಂಸ್ಕøತಿಕ ರಾಜಧಾನಿ ಎನಿಸಿದ ಮೈಸೂರು ನಗರ ಕರ್ನಾಟಕ ರಾಜ್ಯದ ಮುಖ್ಯ ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿದೆ. ಮೈಸೂರು ಅರಸರ ಕಾಲದಿಂದಲೂ ಇಲ್ಲಿ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹವಿದೆ. ಅನೇಕ ಪ್ರಾಥಮಿಕ ಮಾಧ್ಯಮಿಕ, ಪ್ರೌಢಶಾಲೆಗಳೂ ತಾಂತ್ರಿಕ ಹಾಗೂ ವೃತ್ತಿಶಿಕ್ಷಣ ಶಾಲೆಗಳೂ ಕಿವುಡಮೂಗರ ಪಾಠಶಾಲೆಯೂ ಇವೆ. ಮಾನವಿಕ ಮತ್ತು ವಿಜ್ಞಾನ, ವಾಣಿಜ್ಯ ನ್ಯಾಯಶಾಸ್ತ್ರ, ಲಲಿತಕಲೆ, ವ್ಯಾಯಾಮ, ಶಿಕ್ಷಣ, ತಾಂತ್ರಿಕ ಹಾಗೂ ವೈದ್ಯಕೀಯ ಮುಂತಾದ ಕಾಲೇಜುಗಳಿವೆ. 1916 ರಲ್ಲಿ ಸ್ಥಾಪನೆಯಾದ ಪ್ರಸಿದ್ಧ ಮೈಸೂರು ವಿಶ್ವವಿದ್ಯಾನಿಲಯಗಳಿವೆ. ಮಾನಸಗಂಗೋತ್ರಿ ಸ್ನಾತಕೋತ್ತರ ಶಿಕ್ಷಣ ಕೇಂದ್ರ ಇದಕ್ಕೆ ಸೇರಿದ್ದು ಉನ್ನತ ಮಟ್ಟದ ಶಿಕ್ಷಣ ಮತ್ತು ಸಂಶೋಧನೆಗೆ ಅವಕಾಶವಿದೆ. 1897 ರಲ್ಲಿ ಸ್ಥಾಪನೆಯಾದ ಪ್ರಾಚ್ಯವಿದ್ಯಾ ಸಂಶೋಧನಾಲಯವಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಭಾರತೀಯ ಭಾಷಾ ಸಂಸ್ಥಾನ, ವಾಕ್ ಶ್ರವಣಸಂಸ್ಥೆ ಮತ್ತು ಆಡಳಿತಾಧಿಕಾರಿಗಳ ತರಬೇತಿ ಕೇಂದ್ರ ಮುಂತಾದುವು ಇವೆ. ಕೇಂದ್ರ ಆಹಾರ ಸಂಶೋಧನಾಲಯ ಮತ್ತು ರಕ್ಷಣಾ ಖಾತೆಗೆ ಸೇರಿದೆ ಆಹಾರ ಸಂಶೊಧನಾಲಯ, ರೇಷ್ಮೆ ಸಂಶೋಧನಾಲಯ, ಸರ್ಕಾರಿ ಸಾರ್ವಜನಿಕ ಗ್ರಂಥಾಲಯ, ಮೈಸೂರು ವಿಶ್ವವಿದ್ಯಾನಿಲಯ ಗ್ರಂಥಾಲಯ ಮುಂತಾದವುಗಳಿವೆ.

ಮೈಸೂರು ಅರಮನೆ, ಪ್ರಾಚೀನ ಕಲಾಕೃತಿಗಳ ಒಂದು ಅದ್ಭುತ ಕಟ್ಟಡ. ಇದು 1911-12 ರಲ್ಲಿ ಸುಮಾರು 42 ಲಕ್ಷ ರೂಪಾಯಿಗಳ ಖರ್ಚಿನಲ್ಲಿ ಕಟ್ಟಲಾಗಿದೆ. ಜಗನ್ಮೋಹನ ಅರಮನೆಯಲ್ಲಿ ಚಾಮರಾಜೇಂದ್ರ ಚಿತ್ರ ಶಾಲೆಯಿದೆ. ಮೈಸೂರಿನ ಚಾಮರಾಜೇಂದ್ರ ಮೃಗಾಲಯ ಬಲು ಪ್ರಸಿದ್ಧವಾದದ್ದು. ಮೈಸೂರು ನಗರಕ್ಕೆ ಹತ್ತಿರವಾದ ಕೃಷ್ಣರಾಜಸಾಗರ ಮತ್ತು ಬೃಂದಾವನ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು.

ಕೈಗಾರಿಕೆ : ಮೈಸೂರು ನಗರದ ತೀವ್ರ ಬೆಳೆವಣಿಗೆಗೆ ಇತ್ತೀಚಿನ ಕೈಗಾರಿಕಾಕರಣ ಮುಖ್ಯವಾಗಿದೆ. ಅವುಗಳಲ್ಲಿ ರಪ್ತು ಸಾಮಗ್ರಿಗಳ ಉತ್ಪಾದನೆ ಮಾಡುವ ಕೈಗಾರಿಕೆಗಳು ಮತ್ತು ಸ್ಥಳೀಯ ನಿತ್ಯಬಳಕೆಯ ಅವಶ್ಯಕತೆ ಪೂರೈಸುವ ಕೈಗಾರಿಕೆಗಳಿವೆ. ನಗರ ಮತ್ತು ಅದರ ಸುತ್ತ ಇರುವ ಕೈಗಾರಿಕೆಗಳಲ್ಲಿ ಸರ್ಕಾರಿ ರೇಷ್ಮೆ ಬಟ್ಟೆ ತಯಾರಿಕಾ ಕಾರ್ಖಾನೆ, ಗಂಧದ ಎಣ್ಣೆ ಕಾರ್ಖಾನೆ, ಅಗರಬತ್ತಿ ತಯಾರಿಕಾ ಕಾರ್ಖಾನೆಗಳು, ಬೀಡಿ ತಯಾರಿಕೆ ಮುಂತಾದ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿವೆ. 
ಜರ್ಮನ್ ಸರ್ಕಾರದ ನೆರವಿನಿಂದ ಪ್ರಾರಂಭಿಸಿರುವ ದೊಡ್ಡ ಮುದ್ರಣಾಲಯ, ಫಾಲ್ಕನ್ ಮತ್ತು ವಿಕ್ರಾಂತ್ ಟೈರ್ ಕಾರ್ಖಾನೆಗಳು ಇವಲ್ಲದೆ ಅನೇಕ ಮರ ಕೊಯ್ಯುವ ಕಾರ್ಖಾನೆಗಳೂ ಅಕ್ಕಿ ಗಿರಣಿಗಳೂ ಮುದ್ರಣಾಲಯಗಳೂ ವಿದ್ಯುತ್ ಮಗ್ಗಗಳೂ ಮತ್ತು ಕೈಮಗ್ಗಗಳೂ ಹೆಂಚು ಮತ್ತು ಇಟ್ಟಿಗೆ ಕಾರ್ಖಾನೆಗಳೂ ಇವೆ.

ಭಾರತದ ಪ್ರಾಚೀನ ನಗರಗಳಲ್ಲಿ ಕರ್ನಾಟಕದ ಮೈಸೂರು ನಗರವೂ ಒಂದು ಹಿಂದಿನಿಂದಲೂ ಸುಂದರವಾದ ಹಾಗೂ ಚೊಕ್ಕವಾದ ನಗರವೆಂದು ಹೆಸರು ಪಡೆದಿದೆ. ಮಹಾಭಾರತದ ಕಾಲದಲ್ಲಿ ಮಹಿಷನಾಡು ಎಂಬ ಉಲ್ಲೇಖ ಕಂಡುಬರುತ್ತದೆಂದೂ ಹೇಳುವರು. ಸ್ಥಳ ಪುರಾಣದ ಪ್ರಕಾರ ಹಿಂದೆ ಮಹಿಷನೆಂಬ ರಾಕ್ಷಸ ರಾಜನಿದ್ದನೆಂದೂ ಪಾರ್ವತಿದೇವಿ ಚಾಮುಂಡೇಶ್ವರಿಯಾಗಿ ಬಂದು ಅವನನ್ನು ಸಂಹರಿಸಿದ್ದರಿಂದ ಆಕೆಗೆ ಮಹಿಷಾಸುರಮರ್ದಿನಿ ಎಂಬ ಹೆಸರು ಬಂತೆಂದೂ ಹೇಳುವರು. ಆ ಮಹಿಷನ ಊರೇ ಮುಂದೆ ಮೈಸೂರು ಆಯಿತೆಂದೂ ಪ್ರತೀತಿ. ಈ ಮಹಿಷಮಂಡಲದ ಉಲ್ಲೇಖ ಅಶೋಕನ ಕಾಲದಲ್ಲೂ ಕಂಡುಬರುತ್ತದೆ. ಆತ ಬೌದ್ಧಧರ್ಮ ಪ್ರಚಾರಕರನ್ನು ಮಹಿಷಮಂಡಲಕ್ಕೆ ಕಳುಹಿಸಿದನೆಂದೂ ಹೇಳುತ್ತಾರೆ. ಪ್ರಾಚೀನ ತಮಿಳು ಸಾಹಿತ್ಯದಲ್ಲಿ ಎ¾ುಮೈ ನಾಡುಎಂದು ಮೈಸೂರಿನ ಬಗ್ಗೆ ಉಲ್ಲೇಖವಿದೆ. ಅನೇಕ ಶಾಸನಗಳಲ್ಲಿ ಮೈಸೂರನ್ನು ಮಹಿಷೂರು, ಮಹಿಷಪುರ, ಮಹಿಷೂರಪುರ, ಮಹಿಷಾಸುರಪುರ ಎಂದು ಉಲ್ಲೇಖಿಸಿರುವುದು ಕಂಡುಬಂದಿದೆ. ಮೈಸುನಾಡು 70 ಅಸ್ತಿತ್ವದಲ್ಲಿತ್ತೆಂದೂ ನಂದಿಗುಂದ ಗ್ರಾಮ ಮೈಸುನಾಡು 70 ಕ್ಕೆ ಸೇರಿತು. (ನಂಜನಗೂಡು ಶಾಸನ, 1021) ಎಂದೂ ತಿಳಿದುಬರುತ್ತದೆ. 1499 ಮತ್ತು ಅನಂತಗೂಡು ಶಾಸನಗಳಲ್ಲಿ ಮೈಸೂರು ಎಂಬ ಹೆಸರು ಸ್ಪಷ್ಟವಾಗಿರುವುದು ಕಂಡುಬರುತ್ತದೆ. ಮುಂದೆ ಸುಮಾರು 1524 ರಲ್ಲಿ ಬೆಟ್ಟದ ಚಾಮರಾಜನೆಂಬ ಅರಸು ಮೈಸೂರನ್ನು ತನನ ರಾಜಧಾನಿಯಾಗಿ ಮಾಡಿಕೊಂಡು ರಾಜ್ಯಭಾರ ನಡೆಸತೊಡಗಿದನೆಂದೂ 1610 ರಲ್ಲಿ ರಾಜ ಒಡೆಯರು ವಿಜಯನಗರದ ಪ್ರತಿನಿಧಿ ಶ್ರೀರಂಗರಾಯನಿಂದ ಟಿಪ್ಪುವಿನ ಮರಣದ ತನಕ (1799) ಶ್ರೀರಂಗಪಟ್ಟಣ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು. ಅನಂತರ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವತನಕ ಮೈಸೂರು ನಗರ ಮೈಸೂರು ರಾಜ್ಯದ ರಾಜಧಾನಿಯಾಗಿತ್ತು.

	ಮೈಸೂರು ನಗರ ಇಂದು ಕಾರ್ಪೋರೇಷನ್ ಆಡಳಿತಕ್ಕೆ ಸೇರಿದ್ದು ನಗರದಲ್ಲಿ ಆಸ್ಪತ್ರೆಗಳೂ ಅಂಚೆ, ತಂತಿ ಕಚೇರಿ, ರೈಲು, ಮೋಟಾರುವಾಹನ ಸಂಪರ್ಕ ಇತ್ಯಾದಿ ಆಧುನಿಕ ನಗರದ ಬಗೆಯ ಸೌಕರ್ಯಗಳನ್ನೂ ಪಡೆದಿದೆ.
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ